ಧರ್ಮವ್ಯಾದ-
ಮಿಥಿಲಾ ನಗರದ ಒಬ್ಬ ಕಟುಕ.  ಮಾಂಸಮಾರಿ ಜೀವಿಸುತ್ತಿದ್ದ.  ಈತನೊಬ್ಬ ಶಾಪಗ್ರಸ್ತ ಬ್ರಾಹ್ಮಣ.  ಹಿಂದಿನ ಜನ್ಮದಲ್ಲಿ ರಾಜಪುತ್ರರೊಡನೆ ಬೇಟೆಗೆ ಹೋಗಿದ್ದಾಗ ಜಿಂಕೆಯೆಂಬ ಭ್ರಮೆಯಿಂದ ಒಬ್ಬ  ಮುನಿಯನ್ನು ಕೊಂದ.  ಆ ಮುನಿ ಸಾಯುವ ಮುಂಚೆ ನೀನು ಬ್ರಾಹ್ಮಣನಾಗಿದ್ದರೂ ಕ್ಷತ್ರಿಯೋಚಿತವಾದ ಬೇಟೆಗೆ ಬಂದು, ಕಟುಕನ ಕೃತ್ಯವನ್ನು ಮಾಡಿರುವೆ.  ಆದ್ದರಿಂದ ಕಟುಕನಾಗಿ ಜನಿಸು ಎಂದು ಶಾಪ ಕೊಟ್ಟ. ತತ್ಫಲವಾಗಿ ಈತ ಧರ್ಮವ್ಯಾಧನಾಗಿ ಜನಿಸಿದ.  ಈತ ಕಟುಕನಾಗಿದ್ದರೂ ಸತ್ಯಸಂಧ, ಧರ್ಮನಿಷ್ಠ ಆಗಿದ್ದ.  ಅನೇಕ ಧರ್ಮರಹಸ್ಯಗಳನ್ನು ಅರಿತಿದ್ದ.  ಕೌಶಿಕನಂಥ ಮುನಿಗಳೂ ಈತನಿಂದ ಧರ್ಮೋಪದೇಶವನ್ನು ಪಡೆದರು.

	ಈತನಿಗೆ ಅರ್ಜುನನೆಂಬ ಮಗನೂ ಆರ್ಜುನಿತಿ ಎಂಬ ಮಗಳೂ ಇದ್ದರು.  ಮಗಳಿಗೆ ಸಕಲ ನೀತಿ ಶಾಸ್ತ್ರವನ್ನೂ ಕಲಿಸಿ ಮತಂಗ ಮುನಿಯ ಮಗನಾದ ಪ್ರಸನ್ನ ಎಂಬಾತನಿಗೆ ಕೊಟ್ಟು ಮದುವೆ ಮಾಡಿದ.  ಮತಂಗಮುನಿಯ ಪತ್ನಿ ಒಮ್ಮೆ ಸೊಸೆಯನ್ನು ನೀನು ಎಷ್ಟಾದರೂ ಮಾಂಸವನ್ನು ಮಾರಿ ಜೀವಿಸತಕ್ಕವನ ಮಗಳು ಎಂದು ಹೇಳಿದಳು.  ಇದನ್ನು ತಿಳಿದ ಧರ್ಮವ್ಯಾಧ ಮತಂಗ ಮುನಿಯ ಆಶ್ರಮಕ್ಕೆ ಹೋದಾಗ ಅವರು ಈತನನ್ನು ಭೋಜನಕ್ಕೆ ಒತ್ತಾಯ ಮಾಡಿದರು.   ಆಗ ಈತ ಸಸ್ಯಗಳೂ ಜೀವಿಗಳೇ ಎಂಬ ಸತ್ಯವನ್ನು ಹೇಳಿ ಸಸ್ಯಾಹಾರಿಗಳು ಮಾಂಸಾಹಾರಿಗಳಿಗಿಂತ ಹೆಚ್ಚು ಕ್ರೂರಿಗಳೆಂಬ ಅಂಶವನ್ನು ಶ್ರುತಪಡಿಸಿದ.  ಆಗ ಅವರು ತಮ್ಮ ತಪ್ಪನ್ನರಿತು ಅಂದಿನಿಂದ ಸೊಸೆಯನ್ನು ಹಳಿಯುವುದನ್ನು ಬಿಟ್ಟರು.
(ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ